ಉಡುಪಿ: ನಕ್ಸಲ್ ಚಟುವಟಿಕೆಯಲ್ಲಿ ಕಳೆದ 20 ವರ್ಷಗಳ ಹಿಂದೆ ತೊಡಗಿಸಿಕೊಂಡಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶರಣಾಗಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ನಕ್ಸಲ್ ಹೋರಾಟಗಾರ್ತಿ ಸಮಾಜದ ಮುಖ್ಯ ವಾಹಿನಿಗೆ ಆಗಮಿಸಿದ್ದಾರೆ.

ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರಾದ ಶ್ರೀಪಾಲ ಇದ್ದರು. ಎಸ್ ಪಿ ಡಾ.ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆಯು ನಡೆಯಿತು.

ಲಕ್ಷ್ಮಿ ಕಳೆದ ಹಲವು ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ತನ್ನ ಪತಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್ ಡಿ ಕುಲಕರ್ಣಿ ಉಡುಪಿ ಡಿವೈಎಸ್ಪಿ ಡಿಟಿ ಪ್ರಭು ಹಾಗೂ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಜರಿದ್ದರು.

ನಕ್ಸಲ್ ಚಳವಳಿಯಲ್ಲಿ ಉಡುಪಿ ಜಿಲ್ಲೆಯ ವಿಕ್ರಂ ಗೌಡ ಹಾಗೂ ಲಕ್ಷ್ಮಿ ತೊಂಬಟ್ಟು ತೊಡಗಿಸಿಕೊಂಡಿದ್ದರು. ಇದರಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಎನ್ಕೌಂಟರ್ ನಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದರು. ಇದೀಗ ಲಕ್ಷ್ಮಿ, ಪೊಲೀಸರಿಗೆ ಶರಣಾಗಿದ್ದಾರೆ.